ಬದಲಾವಣೆಯ ಹಾದಿಯಲ್ಲಿ …

Bimba Creations
4 min readApr 6, 2022

ಸಂಜೆಯ ಹೊತ್ತು. ಸುಮಾರು ೮ ಗಂಟೆಗೆ ನನ್ನ ಮೊಬೈಲು ರಿಂಗಣಿಸಿತು. ದಾಮಿನಿ ಹೆಸರನ್ನು ಕಂಡು, ಗಾಬರಿಗೊಂಡು, ಕರೆಯನ್ನು ಸ್ವೀಕರಿಸಿದೆ. “ಸಾರಿ ಯಶಸ್ವಿ. ನಾಳೆಯ ತರುಣ ಸಂಘದ ಸಭೆಯಲ್ಲಿ ಭಾಗವಹಿಸುತ್ತಿಲ್ಲಾ. ಕೆಲವು ವೈಯಕ್ತಿಕ ಕಾರಣಗಳಿಂದ ಕೆಲ ಸಮಯ ಈ ಸಂಘದಿಂದ ದೂರವಿರುತ್ತೇನೆ. ಮುಂದೊಂದು ದಿನ ಇದಕ್ಕೆ ಕಾರಣ ಏನೆಂದು ಹೇಳುವೆನು” ಎಂದು ಹೇಳಿ, ಕರೆಯನ್ನು ಸ್ಥಗಿತಗೊಳಿಸಿದಳು.

ಬೆಳಗ್ಗೆ ಇವಳೇ ಅಲ್ಲವೇ ಹೇಳಿದ್ದು ಸಕ್ರಿಯವಾಗಿ ತರುಣ ಸಂಘವನ್ನು ಪ್ರಬಲಗೊಳಿಸಿ, ಯುವ ಶಕ್ತಿಯಿಂದ ಸಮಾಜಕ್ಕೆ ಒಳ್ಳೆಯ ಕೊಡುಗೆಯನ್ನು ಕೊಡಬೇಕೆಂದವಳು. ಹೀಗೆ, ಇದ್ದಕ್ಕಿದ್ದ ಹಾಗೆ ಕರೆ ಮಾಡಿ “ಇದರಿಂದ ಕೆಲ ಸಮಯ ದೂರವಿರುತ್ತೇನೆ” ಎಂದು ಏಕೆ ಹೇಳಿದಳು? ಈ ವಿಷಯದ ಬಗ್ಗೆ ತುಂಬಾ ಯೋಚಿಸದೆ ಅಲ್ಲಿಗೆ ಸುಮ್ಮನಾದೆ. ನಮ್ಮ ತರುಣ ಸಂಘದಲ್ಲಿ ೩ ತಿಂಗಳ ಹಿಂದೆ 20 ಜನರು ಇದ್ದವರು ಈಗ 7–8 ಜನ ಮಾತ್ರ. ಅದರಲ್ಲು ದಾಮಿನಿ ತುಂಬಾ ಸಕ್ರಿಯವಾಗಿ ಕಾರ್ಯದರ್ಶಿಯ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಳು. ಇವಳು ಸಹಾ ಹೋದರೆ ಏನು ಮಾಡುವುದೆಂದು ಕಾಡಿತು.

ಅದಾಗಿ ಒಂದೆರಡು ದಿನದಲ್ಲಿ, ನಾನು ಟಿ.ವಿ ನೋಡುತ್ತಿದ್ದಾಗ ನನ್ನ ಅಮ್ಮ “ನಿನಗೆ ನೆನಪಿದೆಯೇ, 2007 ರಲ್ಲಿ ಶ್ರಾವ್ಯಳಿಗೆ ಹುಡುಗನನ್ನು ನೋಡಲು ನೀನು ಊರಿಗೆ ಹೋಗಿದ್ದೀಯಲ್ಲಾ? ಆ ಹುಡುಗ ಮೊನ್ನೆ ಸಿಂಗಾಪುರದಲ್ಲಿ ತೀರಿಕೊಂಡನಂತೆ. ಅವನು ನಮ್ಮ ದೂರದ ಸಂಬಂಧಿಕರೊಬ್ಬರ ಅಳಿಯ ಆಗಿದ್ದ. ನಿಮ್ಮ ತರುಣ ಸಂಘದಲ್ಲಿರುವ ದಾಮಿನಿಯ ಗಂಡ. ಇಬ್ಬರು ಕೆಲವು ವರ್ಷಗಳ ಹಿಂದೆ ವಿಚ್ಛೇದನೆ ಪಡೆದು ದೂರವಾಗಿದ್ದರು. ಅವನು ಸಿಂಗಾಪುರದಲ್ಲಿ ಇದ್ದನು, ಇವಳು ಇಲ್ಲಿಯೇ ಒಳ್ಳೆ ಕೆಲಸದಲ್ಲಿದ್ದು, ೭ ವರ್ಷದ ಮಗಳೊಂದಿಗೆ ಜೀವನ ಸಾಗಿಸುತ್ತಿದ್ದಾಳೆ.” ಎಂದು ಹೇಳಿದರು.

ವಿಚ್ಛೇದನೆ ಪಡೆದರೂ, ಹಿಂದಿನ ಬಾಂಧವ್ಯಗಳ ನೆನಪು ಮರುಕಳಿಸಿದಾಗ ದುಃಖಿತರಾಗುತ್ತಾರೆ ಎಂದು ನನಗೆ ಅರಿವಾಯಿತು. ಇದಾಗಿ ಒಂದರಿಂದ ಎರಡು ತಿಂಗಳ ನಂತರ ದಾಮಿನಿಗೆ ಸಂದೇಶ ಕಳುಹಿಸಿದೆ, “ತರುಣ ಸಂಘದಲ್ಲಿ ನಿಮ್ಮ ಅವಶ್ಯಕತೆ ತುಂಬಾ ಇದೆ. ಈ ವಾರದ ಸಭೆಗೆ ಬರುತ್ತೀರಲ್ಲವೇ?”. “ಸಾರಿ ಯಶಸ್ವಿ. ಇನ್ನೂ ಕೆಲವು ಸಮಯ ಬೇಕಾಗಬಹುದು” ಎಂದು ಅವಳಿಂದ ಸಂದೇಶ ಬಂದಾಗ “ನಿಮ್ಮೊಂದಿಗೆ ಮಾತನಾಡಬೇಕು, ಬಿಡುವಾದಾಗ ಹೇಳಿ” ಎಂದೆ.

ಎರಡು ದಿನ ಕಳೆದು ದಾಮಿನಿಯಿಂದ ಕರೆ ಬಂದಿತು. “ನಿಮಗೆ ತಿಳಿದಿರಲಿಕ್ಕಿಲ್ಲ. ೨ ತಿಂಗಳ ಹಿಂದೆ…” ಎಂದು ಹೇಳುವಷ್ಟರಲ್ಲಿ, ನಾನು ಹೇಳಿದೆ. “ನನಗೆ ಎಲ್ಲಾ ತಿಳಿದಿದೆ. ನಿಮ್ಮ ಭಾವನೆಗಳ ಬಗ್ಗೆ ಗೌರವವಿದೆ. ಅದರೂ, ಇನ್ನೂ ಎಷ್ಟು ದಿನ ಅಂತ ಹೀಗೆ ದುಃಖದಲ್ಲಿರುತ್ತೀರಿ. ಜೀವನ ಸಾಗಬೇಕಾದರೆ ವಾಸ್ತವವನ್ನು ಒಪ್ಪಿಕೊಂಡು ಮುಂದೆ ಹೋಗಬೇಕು” ಎಂದೆ. ದಾಮಿನಿ ಹೇಳಿದಳು “ಅಯ್ಯೋ, ಇದರಿಂದ ನಾನು ಹೊರಗೆ ಬಂದಾಯಿತು. ಕೆಲಸಕ್ಕೆ ಸಹಾ ಹೋಗುತ್ತಿದ್ದೇನೆ. ತರುಣ ಸಂಘಕ್ಕೆ ಮರಳಲು, ನನ್ನ ತಂದೆ ತಾಯಿ ಇನ್ನು ಕೆಲವು ಸಮಯ ಆಗಲಿ ಎಂದು ಹೇಳುತ್ತಿದ್ದಾರೆ. ಆದುದರಿಂದ ದೂರವಿದ್ದೇನೆ ಅಷ್ಟೇ. ನಮ್ಮ ಸಮಾಜದಲ್ಲಿ, ಮೊನ್ನೆ ತಾನೆ ಗಂಡನನ್ನು ಕಳೆದು ಕೊಂಡವಳು, ಇವಳಿಗೆ ಈ ಸಂಘ ಸಂಸ್ಥೆಗಳೆಲ್ಲಾ ಬೇಕಾ ಎಂಬ ಮಾತುಗಳು ಕೇಳಲು ಸಿಗಬಹುದು ಎಂಬ ಒಂದೇ ಕಾರಣಕ್ಕೆ ಅಪ್ಪ ಅಮ್ಮನ ಮಾತು ಕೇಳಿ ಸುಮ್ಮನಿದ್ದೇನೆ” ಎಂದಳು.

“ಮೂರನೆಯವರು ಸಾವಿರ ಮಾತುಗಳನ್ನು ಆಡುತ್ತಾರೆ. ಅವರು ಹೀಗೆಲ್ಲಾ ಮಾತುಗಳನ್ನಾಡುತ್ತಾರೆ ಎಂದು ನಮ್ಮ ಬದುಕನ್ನು ಅವರ ಕೈಗೆ ಕೊಡಬಾರದು. ಮುಂದಿನ ವಾರದ ಸಭೆಯಲ್ಲಿ ನೀವು ಬರಲೇಬೇಕು” ಎಂದು ಹೇಳಿ ಕರೆಯನ್ನು ಸ್ಥಗಿತಗೊಳಿಸಿದೆ.

ಆದರೂ, ಮನಸಲ್ಲಿ ಈ ವಿಷಯವು ಕಾಡ ತೊಡಗಿತು. ದುಃಖದಿಂದ ಸಂತೋಷದ ಕಡೆಗೆ ಕಡಿಮೆ ಸಮಯದಲ್ಲಿ ಮನುಷ್ಯನಲ್ಲಿ ಬದಲಾವಣೆ ಕಂಡಾಗ ಬಹಳಷ್ಟು ಸಲ ನಾನು ಹೀಗೆ ಪ್ರತಿಕ್ರಿಯಿಸಿದ್ದುಂಟು. ನನ್ನ ಸ್ನೇಹಿತನ ತಂದೆ ತೀರಿಕೊಂಡಾಗ “ಇವನು ತನ್ನ ತಂದೆಯನ್ನು ಕಳೆದುಕೊಂಡು ಎರಡು ದಿನ ಆಗಿಲ್ಲ ಮಾರಾಯ, ನೋಡು ಎಷ್ಟು ಖುಷಿಯಾಗಿದ್ದಾನೆ. ಇವನಿಗೇನು ದುಃಖವೇ ಇಲ್ಲವೇ!”. ಹೀಗೆ ಮನಸ್ಸಿನಲ್ಲಿ ಅಂದುಕೊಂಡಿದ್ದೂ ಉಂಟು.

ಆದರೆ, ದಾಮಿನಿಯ ವಿಷಯದಲ್ಲಿ ಹೀಗೆ ಅನ್ನಿಸಲಿಲ್ಲ. ಸಮಾಜಕ್ಕೆ ಹೆದರಿ ನಮ್ಮನ್ನು ಕಟ್ಟಿಹಾಕಿಕೊಳ್ಳುವುದರಲ್ಲಿ ಏನು ಸಾಧಿಸುತ್ತೇವೆ? ಎಂಬ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ನಾನು ಈ ಸಮಾಜದ ಒಂದು ಭಾಗ ಅಂದುಕೊಂಡು, ಜನರ ದುಃಖಕ್ಕಿಂತ ಅವರಲ್ಲಿ ಸಂತೋಷದ ಕ್ಷಣಗಳನ್ನು ತುಂಬುವಲ್ಲಿ ಸಮಾಜದ ಅಭಿವೃಧ್ದಿ ಅಡಗಿರುತ್ತದೆ ಎಂದು ಅರಿವಾಯಿತು.

ನಾವೇ ಸಮಾಜವನ್ನು ಕಟ್ಟುವವರು. ಒಬ್ಬರ ಜೀವನ ಪಥದಲ್ಲಿ ಧೈರ್ಯ, ಖುಷಿ, ಸಹಿಷ್ಣುತೆ, ಉಪಕಾರ ಆಗುವಂತಹ ವಿಚಾರಗಳ ಬಗ್ಗೆ ಮಾತನಾಡಿದರೆ, ಅವರಿಗೆ ಜೀವನದಲ್ಲಿ ಏನಾದರು ಸಾಧಿಸ ಬಹುದು ಎಂಬ ಹುಮ್ಮಸ್ಸು ಮೂಡುತ್ತದೆ.

ಮೊದಲಿಗೆ ನಮ್ಮ ಮನಸ್ಸಿನಲ್ಲಿ ಈ ಬದಲಾವಣೆ ಬರಬೇಕು. “ನಾನು ಈ ಸಮಾಜದ ಅವಿಭಾಜ್ಯ ಅಂಗ. ನಾನು ಬದಲಾದರೆ ಸಮಾಜವೇ ಬದಲಾಗುತ್ತದೆ” ಎಂಬ ನಂಬಿಕೆ ಇರಬೇಕು ಆಗ ಅಸಾಧ್ಯವಾದದ್ದು ಯಾವುದೂ ಇಲ್ಲ.

ಸಕಾರಾತ್ಮಕ ವಿಚಾರಗಳನ್ನೇ ಕೇಳೋಣ. ಕೇಳಿಸೋಣ. ನಡೆದುಕೊಳ್ಳೋಣ. ಏನಂತೀರಾ?

--

--

Bimba Creations

My name is Yashaswi J. I am an independent publisher, designer, artist and photographer.